ಬೆಸೆಲ್, ಫ್ರೀಡ್‍ರಿಕ್, ವಿಲ್‍ಹೆಲ್ಮ್
1784-1846. ಜರ್ಮನ್ ಖಗೋಳವಿಜ್ಞಾನಿ ಜನನ: ಮಿಂಡನ್, ಪ್ರಶ್ಯಾ, 29 ಜುಲೈ 1784; ಮರಣ: ಕೋನಿಗ್ಸ್‍ಬರ್ಗ್ (ಈಗ ಕಾಲಿನಿನ್ ಗ್ರಾಡ್), 17 ಮಾರ್ಚ್ 1846. ಲೆಕ್ಕಪರಿಶೋಧಕನಾಗಿ ಬದುಕು ಆರಂಭ. ಖಗೋಳ ವಿಜ್ಞಾನವನ್ನು ಸ್ವಂತವಾಗಿ ಕಲೆತು ಹ್ಯಾಲೀಯ ಧೂಮಕೇತುವಿನ ಕಕ್ಷೆಯನ್ನು ಮರುಗಣಿಸಿ ದೊರೆತ ಫಲಿತಾಂಶವನ್ನು ಆಲ್ಬರ್ಸ್ ಎಂಬ ವಿಖ್ಯಾತ ಖಗೋಳವಿಜ್ಞಾನಿಗೆ ರವಾನಿಸಿದ. ಇದರ ತೂಕವನ್ನು ಒಡನೆ ಗ್ರಹಿಸಿದ ಆಲ್ಬರ್ಸ್ ಬೆಸೆಲನಿಗೆ ವೇದಶಾಲೆಯೊಂದರಲ್ಲಿ ಕೆಲಸಮಾಡಿಕೊಟ್ಟ. ಮುಂದೆ ಕೋನಿಗ್ಸ್‍ಬರ್ಗಿನಲ್ಲಿ ನಿರ್ಮಿಸಲಾಗುತ್ತಿದ್ದ ನೂತನ ವೇದಶಾಲೆಯ ನಿರ್ದೇಶಕನಾಗಿ ನೇಮಕಗೊಂಡು ಕೊನೆಯ ತನಕವೂ ಅಲ್ಲಿಯೇ ಸೇವೆ ಸಲ್ಲಿಸಿದ. 

	ನಕ್ಷತ್ರಗಳ ದಿಗಂತರ (ಪ್ಯಾರಲ್ಯಾಕ್ಸ್) ವಿದ್ಯಮಾನವನ್ನು ಶೋಧಿಸಿ ಬೆಸೆಲ್ ಖಗೋಳವಿಜ್ಞಾನ ಪ್ರಪಂಚದಲ್ಲೆ ದಾಖಲೆ ಸ್ಥಾಪಿಸಿದ್ದಾನೆ. ವೀಕ್ಷಕನ ಸ್ಥಾನ ವ್ಯತ್ಯಾಸದ ಪರಿಣಾಮವಾಗಿ ವೀಕ್ಷಿತ ವಸ್ತುವಿನ ಸ್ಥಾನದಲ್ಲಿ ಕಂಡುಬರುವ ಸ್ಥಾನಾಂತರಣೆಯೇ ದಿಗಂತರ. ಭೂಮಿಯ ಮೇಲಿನ ಯಾವುದೇ ಎರಡು ದೂರತಮ ಬಿಂದುಗಳಿಂದ ಒಂದೇ ನಕ್ಷತ್ರವನ್ನು ವೀಕ್ಷಿಸಿದಾಗ ಅದರ ಸ್ಥಾನಾಂತರಣೆ ಕಂಡುಬಾರದು. ಇಲ್ಲಿಯ ಆಧಾರ ರೇಖೆಯೊಡನೆ ಹೋಲಿಸಿದಾಗ ನಕ್ಷತ್ರ ದೂರ ಅತ್ಯಧಿಕವಾಗಿರುವುದೇ ಇದರ ಕಾರಣ. ಹೀಗಲ್ಲದೇ ಭೂಮಿಯ ಕಕ್ಷಾವ್ಯಾಸವನ್ನೇ ಆಧಾರ ರೇಖೆಯಾಗಿ ಆಯ್ದುದಾದರೆ ಪರಿಸ್ಥಿತಿ ಅನುಕೂಲಕರವಾಗದಿರದು. ಬೆಸಲ್ ಮಾಡಿದ್ದು ಇದನ್ನೇ. 61 ಸಿಗ್ನಿ ಎಂಬ ನಕ್ಷತ್ರದ ದಿಗಂತರವನ್ನು ಈ ತೆರನಾಗಿ ಅಳೆದು ಅದು ಭೂಮಿಯಿಂದ ಸುಮಾರು 56000,000,000,000 ಕಿಮೀ ದೂರದಲ್ಲಿದೆ ಎಂದು ನಿರ್ಧರಿಸಿದ. ಬೆಳಕು ಸೆಕೆಂಡಿಗೆ ಸುಮಾರು 2,98,000 ಕಿಮೀ ಗಮಿಸುವುದೆಂದು ಅಂದು ತಿಳಿದಿದ್ದುದರಿಂದ ಒಂದು ವರ್ಷದಲ್ಲಿ ಬೆಳಕು ಗಮಿಸುವ ದೂರವನ್ನು ಜ್ಯೋತಿರ್ವರ್ಷವೆಂದು (ಲೈಟ್-ಇಯರ್) ಹೆಸರಿಸಿ ಈ ಮಾನಕದ ಅನುಸಾರ ಖಗೋಳೀಯ ದೂರುಗಳನ್ನು ಅಳೆಯುವ ಕ್ರಮ ಆಗ ಚಾಲ್ತಿಗೆ ಬಂದಿತು. ಇದರ ಪ್ರಕಾರ 61 ಸಿಗ್ನಿಯ ದೂರ ಸುಮಾರು 6 ಜ್ಯೋತಿರ್ವರ್ಷಗಳು. 

 	ಕೊರ್ಪನಿಕಸ್ ಪ್ರತಿಪಾದಿಸಿದ ಸೂರ್ಯಕೇಂದ್ರವಾದಕ್ಕೆ ಭದ್ರ ವೈಜ್ಞಾನಿಕ ನೆಲಗಟ್ಟು ಒದಗಿಸಿದ ಪ್ರತ್ಯಕ್ಷ ಪುರಾವೆಗಳು ಎರಡು: ಬ್ರ್ಯಾಡ್ಲೇ ಆವಿಷ್ಕರಿಸಿದ ಬೆಳಕಿನ ವಿಪಥನ ಹಾಗೂ ಬೆಸೆಲ್ ಆವಿಷ್ಕರಿಸಿದ ನಕ್ಷತ್ರಗಳ ದಿಗಂತರ. ಬೆಸೆಲನ ತನಕ ಸೌರವ್ಯೂಹದಲ್ಲೇ ಗಮನ ಸಾಂದ್ರೀಕರಿಸಿದ್ದ ಖಗೋಳವಿಜ್ಞಾನಿಗಳು ತರವಾಯದ ದಿನಗಳಲ್ಲಿ ಸೌರವ್ಯೂಹಾತೀತ ನಕ್ಷತ್ರಲೋಕಕ್ಕೆ ನಮ್ಮ ಲಕ್ಷ್ಯ ಹರಿಸಿದರು. 	   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ